ಭಾವಾತಿರೇಕ 1

	 ಮಾನಸಿಕ ತುಮುಲದಿಂದ ಅಸಂತುಷ್ಟ ಭಾವ ತಾಳಿ ಸಮಾಜದ ವ್ಯವಸ್ಥೆಗೆ ಹೊಂದಿಕೊಳ್ಳಲಾರದೆ ತೊಳಲಾಡುವ ವ್ಯಕ್ತಿಯಲ್ಲಿ ಕಾಣಬರುವ ಮಾನಸಿಕ ಹಾಗೂ ದೈಹಿಕ ಗೊಂದಲಗಳು (ನ್ಯೂರೋಸಿಸ್). ಇವು ಬುದ್ಧಿ ವಿಕಲ್ಪಸ್ಥಿತಿಗಳಷ್ಟು (ಸೈಕೊಸಸ್) ಗುರುತರವಾಗಿರುವುದಿಲ್ಲ. ಭಾವಾತಿರೇಕ ಸ್ಥಿತಿಯಲ್ಲಿ ದೇಹದ ಕೆಲವು ಭಾಗಗಳ ಮೇಲಿನ ಹತೋಟಿ ತಪ್ಪಿಹೋಗುವುದು. ಉಸಿರಾಡಲು ಆಗದೇ ಇರುವುದು, ಅತಿಯಾದ ಆಯಾಸ, ತಲೆನೋವು, ಎದೆ ಹೊಡೆದುಕೊಳ್ಳುವುದು, ಹೃದಯದ ತೊಂದರೆ ಮತ್ತು ಅನೇಕ ತರಹದ ನೋವು ಬಾಧೆಗಳು-ಇವು ದೈಹಿಕವಾಗಿ ಕಂಡುಬರುವ ಗೊಂದಲಗಳು. ಕುಂಠಿತ ಜ್ಞಾಪಕಶಕ್ತಿ, ಮುಂಗೋಪ, ನಿಜವಲ್ಲದ ಸಂದೇಹಗಳು, ಮನೋಗ್ರಸ್ತ ವಿನಾಕಾರಣ ಹೆದರಿಕೆಗಳು, ನಿದ್ರೆ ಇಲ್ಲದಿರುವುದು ಮತ್ತು ಸಾಂಘಿಕ ಜೀವನ ನಡೆಸಲಾಗದೆ ಇರುವುದು-ಇವು ಮಾನಸಿಕ ಅವ್ಯವಸ್ಥೆಗಳು. ಜನಸಾಮಾನ್ಯರಲ್ಲಿ ಶೇಕಡಾ 5ರಿಂದ 10 ಭಾಗದಷ್ಟು ಜನ, ತಮ್ಮ ಜೀವನದಲ್ಲಿ ಒಂದಲ್ಲ ಒಂದು ಸಾರಿ ಭಾವಾತಿರೇಕಕ್ಕೆ ಒಳಗಾಗುವರೆಂದು ಹೇಳಲಾಗಿದೆ.

	ಭಾವಾತಿರೇಕಕ್ಕೆ ಒಳಗಾದವರ ಸ್ಥಿತಿಯನ್ನು ಈ ಮುಂದಿನಂತೆ ವಿಂಗಡಿಸಬಹುದು:

	1 ಉನ್ಮಾದ, 2 ಉದ್ವೇಗ, 3 ಬಾಧ್ಯತಾ ಮನೋಗ್ರಸ್ತ ಪ್ರತಿಕ್ರಿಯೆ, 4 ಭೀತಿ, 5 ನರಗ್ಲಾನಿ, 6 ಮನಶ್ಯರೀರ ರೋಗ.

	1 ಉನ್ಮಾದ: ಈ ಅವಸ್ಥೆಗೆ ಒಳಗಾದ ವ್ಯಕ್ತಿ ತನ್ನ ನಿಶ್ಯಕ್ತಿಯನ್ನೇ ದೊಡ್ಡದು ಮಾಡಿಕೊಂಡು ಜೀವನದ ಕಷ್ಟನಷ್ಟಗಳಿಂದ ದೂರ ಸರಿಯಲು ಯತ್ನಿಸುತ್ತಾನೆ (ಎಸ್‍ಕೇಪ್ ಫಿನಾಮಿನನ್). ಗೌರವದ ಹಿಮ್ಮೆಟುವಿಕೆ ಎಂದೂ ಇದನ್ನು ಕರೆಯುತ್ತಾರೆ. ಅಂದರೆ ರೋಗಿ ಬಾಹ್ಯಪ್ರಪಂಚದ ಬಾಂಧವ್ಯವನ್ನು ಹಾಳುಮಾಡಿಕೊಳ್ಳದೆ ತನ್ನ ರೋಗಲಕ್ಷಣಗಳ ನೆಪದಲ್ಲಿ ತನಗೆ ಒದಗಿಬಂದಿರುವ ಕಷ್ಟಗಳಿಂದ ಪಾರಾಗುವನಲ್ಲದೆ ಬೇರೆಯವರ ಪ್ರೀತಿಕರುಣೆಗಳನ್ನೂ ಸಂಪಾದಿಸುತ್ತಾನೆ. ಅನೇಕ ಸಂದರ್ಭಗಳಲ್ಲಿ ಬೇರೆಯವರ ಗಮನ ಸೆಳೆಯಬೇಕು. ಅವರ ದಯೆ ಅನುಕಂಪ ಗಳಿಸಬೇಕು ಎನ್ನುವುದೇ ಈ ರೋಗಿಗಳ ಅಂತರಂಗದ ಇಚ್ಛೆಯಾಗಿರುತ್ತದೆ. ಆದ ಕಾರಣ ಇವರು ತಮ್ಮ ಕಾಯಿಲೆಯನ್ನು ಗುಣಪಡಿಸಿಕೊಳ್ಳಲು ಇಷ್ಟಪಡುವುದಿಲ್ಲ. ಅದರ ಬಗ್ಗೆ ಒಂದು ತರಹದ ನಿರ್ಲಕ್ಷ್ಯಮನೋಭಾವ ಬೆಳೆಸಿಕೊಳ್ಳುತ್ತಾರೆ. ಕೈಕಾಲುಗಳಲ್ಲಿ ಶಕ್ತಿ ಇಲ್ಲದಂತಾಗಿ ಕೆಲಸ ಮಾಡಲಾಗದೇ ಹೋಗುವುದು, ಬಿಕ್ಕಳಿಕೆ, ಊಟ ಸೇರದೇ ಇರುವುದು, ಮೂರ್ಛೆ ಹೋಗುವುದು ಮುಂತಾದವು ಈ ರೋಗಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು.

	2 ಉದ್ವೇಗ: ಈ ಅವಸ್ಥೆಯನ್ನು ರಾಸ್ ಎಂಬಾತ ವಿವರಿಸುತ್ತ ಇದು ಒಬ್ಬಾತನ ಹೊರ ಆವರಣದ ಜೊತೆ ವಿಕೃತ ಹೊಂದಾಣಿಕೆಯ ಚಿಹ್ನೆ ಎಂದು ಕರೆಯುತ್ತಾನೆ. ತನ್ನ ಹೊರ ಆವರಣದ ಸಾಮಾನ್ಯ ಪ್ರಚೋದನೆಗಳಿಗೂ ಈ ರೋಗಿ ಅತಿಯಾಗಿ ಪ್ರತಿಕ್ರಿಯಿಸುತ್ತಾನೆ. ಕೆಲವು ವೇಳೆ ಹೊರ ಆವರಣದಲ್ಲಿ ಯಾವ ಕಾರಣವಿಲ್ಲದಿದ್ದರೂ ತಾನು ಯಾವುದೋ ಭಯಪ್ರದ ಸನ್ನಿವೇಶದಲ್ಲಿ ಇರುವಂತೆ ಹೆದರಿದವನಾಗಿ ಬೆವರುವುದು, ಎದೆ ಹೊಡೆದುಕೊಳ್ಳೂವುದು, ಬಾಯಿ ಒಣಗುವುದು ಮೊದಲಾದ ಲಕ್ಷಣಗಳನ್ನು ಪ್ರಕಟಿಸುತ್ತಾನೆ. ತಲೆತಿರುಗುವುದು, ಕೈನಡುಗುವುದು, ಮುಂದೆ ಒದಗಬಹುದಾದ ಕಷ್ಟದ ವಿಚಾರವಾಗಿ ಆಕಾರಣ ಹೆದರಿಕೆ-ಇವೇ ಮೊದಲಾದವು ಈ ರೋಗದ ಇತರ ಲಕ್ಷಣಗಳು.

	3 ಬಾದ್ಯತಾ ಮನೋಗ್ರಸ್ತ ಪ್ರತಿಕ್ರಿಯೆ: ಈ ಅವಸ್ಥೆಯಲ್ಲಿರುವ ರೋಗಿ ಸದಾಕಾಲವೂ ಯಾವುದಾದರೊಂದು ಕೆಲಸ ಮಾಡಬೇಕು. ಅಥವಾ ಯಾವುದಾದರೊಂದು ವಿಚಾರ ಯೋಚಿಸಬೇಕು ಅಥವಾ ಮಾತಾಡಬೇಕು ಎನ್ನುವ ಇಷ್ಟ ತಡೆದುಕೊಳ್ಳಲಾಗದಷ್ಟರ ಮಟ್ಟಿಗೆ ಇರುತ್ತಾನೆ. ಉದಾಹರಣೆಗೆ ರಸ್ತೆಯ ಬದಿಯಲ್ಲಿರುವ ಪ್ರತಿಯೊಂದು ವಿದ್ಯುತ್ ಕಂಬವನ್ನು ಮುಟ್ಟಬೇಕೆನ್ನುವ ಆಸೆ, ಯಾವಾಗಲೂ ಕೈಯ್ಯನ್ನು ಸಾಬೂನು ಹಚ್ಚಿ ತೊಳೆಯಬೇಕೆನ್ನುವ ಆಸೆ, ಯಾವುದಾದರೊಂದು ಸಂಖ್ಯೆಯನ್ನು ಅಥವಾ ಹೆಸರನ್ನು ಮನಸ್ಸಿನಲ್ಲೇ ಹೇಳಿಕೊಳ್ಳುತ್ತಿರ ಬೇಕೆನ್ನುವ ಆಸೆ. ರೋಗಿಗೆ ತನ್ನ ಇಷ್ಟಗಳು ಎಷ್ಟು ಅಲ್ಪ, ಹುರುಳಿಲ್ಲದ್ದು ಎನ್ನುವುದು ತಿಳಿದಿದ್ದರೂ ಹಾಗೆ ಮಾಡದೇ ಇರಲು ಸಾಧ್ಯವಾಗುವುದಿಲ್ಲ. ಈ ರೋಗದ ಮೂಲವನ್ನು ಕೆಲವು ಮನಶಾಸ್ತ್ರಜ್ಞರು ವರ್ಣಿಸುತ್ತಾ ರೋಗಿ ಏನನ್ನೂ ಮಾಡುತ್ತಿರುತ್ತಾನೆಯೋ ಅದೇ ಅವನ ಸುಪ್ತಚೇತನದಲ್ಲಿ ಅಡಗಿರುವ ಯಾವುದೋ ಆಸೆಯನ್ನು ಈಡೇರಿಸುತ್ತದೆ ಎನ್ನುತ್ತಾರೆ.

	4 ಭೀತಿ: ಈ ಅವಸ್ಥೆಗೊಳಗಾದ ವ್ಯಕ್ತಿ ಯಾವುದಾದರೊಂದು ವಿಚಾರವಾಗಿ ವಿನಾಕಾರಣ ಹೆದರಿಕೆ ಬೆಳೆಸಿಕೊಂಡುಬಿಡುತ್ತಾನೆ. ಉದಾಹರಣೆಗೆ ನೀರು ಮುಟ್ಟಲು ಹೆದರಿಕೆ, ಕತ್ತಲೆಯಲ್ಲಿ ಒಬ್ಬನೆ ನಡೆಯಲು ಹೆದರಿಕೆ, ಎತ್ತರ ಜಾಗದಲ್ಲಿ ನಿಂತು ಕೆಳಗಿನ ತಗ್ಗುಜಾಗ ನೋಡಲು ಹೆದರಿಕೆ-ಇಂಥ ಅನೇಕ ತರಹದ ಹೆದರಿಕೆಗಳು. ಇದರ ರೋಗ ಮೂಲ ನೋಡಿದರೆ ರೋಗಿ ಯಾವುದೋ ಒಂದು ಸಲ ಒಂದು ಸನ್ನಿವೇಶದಲ್ಲಿ ಅದು ಭಯಾನಕವಾಗಿಲ್ಲದಿದ್ದರೂ ಏಕೋ ಅತಿ ಭಯಂಕರ ಅನುಭವಕ್ಕೆ ತುತ್ತಾಗಿರುತ್ತಾನೆ. ಕಾಲಕ್ರಮೇಣ ಅದು ಮರೆತು ಹೋದಂತಿದ್ದರೂ ಮುಂದೆ ಅಂಥ ಸನ್ನಿವೇಶ ಒದಗಿದಾಗಲೆಲ್ಲ ಆ ಭಾವನಾಪ್ರತಿಕ್ರಿಯೆ ಮಾತ್ರ ಮರುಕಳಿಸುತ್ತದೆ. ಆದ ಕಾರಣ ರೋಗಿ ತೋರಿಸುವ ಭಯ ಈ ಸನ್ನಿವೇಶದಲ್ಲಿ ಬುಡವಿಲ್ಲದಂತೆ ಕಂಡುಬರುತ್ತದೆ.

	5 ನರಗ್ಲಾನಿ : ಇದರಿಂದ ನರಳುತ್ತಿರುವ ವ್ಯಕ್ತಿ ಸದಾಕಾಲ ಆಯಾಸ ನಿಶ್ಯಕ್ತಿಯ ಚಿಹ್ನೆ ತೋರಿಸುತ್ತಾನೆ. ಈ ಚಿಹ್ನೆಗಳೆಲ್ಲವೂ ಒಬ್ಬ ಸಾಮಾನ್ಯ ಮನೋರೋಗಿ ತನ್ನ ಸ್ವಂತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಆಗದೇ ಹೋದಾಗ ತೋರುವ ಅತಿಶಯ ಭಾವನಾ ಪ್ರತಿಕ್ರಿಯೆಗಳು. ಈ ಮಾನಸಿಕ ಗೊಂದಲ ಸದಾಕಾಲ ರೋಗಿಯ ಸುಪ್ತಚೇತನದಲ್ಲಿ ಇದ್ದು ಆತನ ಭಾವನಾ ಪ್ರತಿಕ್ರಿಯೆಗಳು ರೋಗಲಕ್ಷಣಗಳಾಗಿ ಕಾಣಿಸಿಕೊಳ್ಳುತ್ತವೆ. ಅತಿಹೆಚ್ಚಿನ ದೈಹಿಕ ಮತ್ತು ಮಾನಸಿಕ ಆಯಾಸ, ತಲೆಭಾರ. ಕುಂಠಿತ ಜ್ಞಾಪಕಶಕ್ತಿ ಮತ್ತು ಏಕಾಗ್ರತೆ, ದುಡುಕು ಮನೋಭಾವ, ನಿದ್ರಾಹೀನತೆ, ಸೋಮಾರಿತನ, ಧ್ವನಿಗುಂದುವಿಕೆ ಮತ್ತು ಅನೇಕ ತರಹದ ನೋವುಬಾಧೆಗಳು-ಇವೇ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು. ಬೆಳಗ್ಗೆ ಹಾಸಿಗೆಯಿಂದ ಏಳುತ್ತಲೇ ತಾವು ಆಯಾಸ ನಿಶ್ಯಕ್ತಿಯಿಂದ ನರಳುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ. ಅದರಲ್ಲೂ ತೈರಾಯಿಡ್ ಗ್ರಂಥಿಯ ತೊಂದರೆ ಇದ್ದು ಕಡಿಮೆ. ರಕ್ತ ಒತ್ತಡದಿಂದ ನರಳುತ್ತಿರುವ ನೀಳ ದೇಹದ ನಿತ್ರಾಣ ಜನರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ನರಗ್ಲಾನಿಯೊಂದರಿಂದಲೇ ನರಳುತ್ತಿರುವ ರೋಗಿಗಳು ಅತಿ ಸರಳ. ಇತರ ಮನೋರೋಗಗಳೂ ಜೊತೆಗೆ ಇದ್ದೇ ಇರುತ್ತವೆ.

	6 ಮನಶ್ಯರೀರ ರೋಗ : ಈ ರೋಗಲಕ್ಷಣವುಳ್ಳವರಲ್ಲಿ ಚಿಂತೆ, ಜುಗುಪ್ಸೆ ಅಥವಾ ಇನ್ನಾವುದಾದರೊಂದು ರೀತಿಯ ಮಾನಸಿಕ ಅಥವಾ ಭಾವನಾತ್ಮಕ ತೊಂದರೆಗಳು, ದೈಹಿಕ ರೋಗಲಕ್ಷಣಗಳಾಗಿ ಹೊರಹೊಮ್ಮುತ್ತವೆ. ಉದಾಹರಣೆಗೆ ತಲೆನೋವು, ಕೈನಡುಕ, ಮೂರ್ಛೆಬೀಳುವುದು, ಎದೆನೋವು, ವಾಂತಿಮಾಡಿಕೊಳ್ಳುವುದು, ಉಸಿರಾಡುವುದರಲ್ಲಿ ತೊಂದರೆ, ನಿದ್ರೆ ಇಲ್ಲದಿರುವುದು ಇವು ಕೆಲವರಲ್ಲಿ ಮಾನಸಿಕ ಅಥವಾ ಭಾವನಾತ್ಮಕ ಕಾರಣದಿಂದ ಪ್ರಾರಂಭವಾಗುತ್ತವೆ.

	ಭಾವಾತಿರೇಕದಿಂದ ನರಳುತ್ತಿರುವ ರೋಗಿಗಳ ಜೀವನವನ್ನು ಕೂಲಂಕಷವಾಗಿ ನೋಡಿದಾಗ ಈ ಕಾಯಿಲೆ ಪ್ರಾರಂಭವಾಗುವುದಕ್ಕೆ ಮೊದಲು ಇವರು ಭಾವನಾತ್ಮಕ ಅನುಭವ ಅಥವಾ ಮಾನಸಿಕ ಗೊಂದಲಕ್ಕೆ ಬಿದ್ದರುವುದನ್ನು ಕಾಣಬಹುದು. ಉದಾಹರಣೆಗೆ ಭಗ್ನಪ್ರೇಮ, ಲೇವಾದೇವಿ ವಿಚಾರದಲ್ಲಿ ಸೋಲು, ಆಪ್ತರಾದವರೊಬ್ಬರ ಮರಣ, ಔನ್ನತ್ಯದ ಭಯಾನುಭವ, ಸಂಸಾರದಲ್ಲಿ ಕಲಹ, ಕೆಲಸದಲ್ಲಿ ಹೊಂದಾಣಿಕೆ ಇಲ್ಲದಿರುವುದು ಇತ್ಯಾದಿ. ಆದರೆ ಈ ಲಕ್ಷಣಗಳು ಕಾಣಿಸುವುದಕ್ಕೆ ಮೊದಲು ವ್ಯಕ್ತಿಗೆ ಆಗುವ ಭಾವನಾತ್ಮಕ ಆಘಾತವೇ ಈ ರೋಗಕ್ಕೆ ಕಾರಣವೆಂದು ತಿಳಿಯಬಾರದು. ಯಾವ ರೋಗಿಯಲ್ಲಿ ಸುಲಭ ಪ್ರೇರ್ಯಪ್ರವೃತ್ತಿ (ಸಸ್ಸೆಪ್ಟಿಬಿಲಿಟಿ) ಇರುತ್ತದೆಯೋ ಆತ ಮಾತ್ರ ಘಾತ ಸನ್ನಿವೇಶದಲ್ಲಿ ಈ ಲಕ್ಷಣಗಳನ್ನು ತೋರಿಸುತ್ತಾನೆ. ಇಂಥ ಪ್ರವೃತ್ತಿ ಒಬ್ಬಾತನ ಅನುವಂಶೀಯತೆ ಬಾಲ್ಯ ವಾತಾವರಣ ಮತ್ತು ತರಬೇತಿ ಇವುಗಳಿಗೆ ಅನುಗುಣವಾಗಿರುತ್ತವೆ.

	ಭಾವಾತಿರೇಕ ತೋರುವವರ ವ್ಯಕ್ತಿತ್ವದ ಬಗ್ಗೆ ಕುರಿತು ಹೇಳುವುದಾದರೆ, ಇವರು ಅಸಂತುಷ್ಟ, ಅತೃಪ್ತಿ ಮನೋಭಾವ ತಳೆದು ಧೈರ್ಯಗುಂದಿದವರಾಗಿರುತ್ತಾರೆ. ತಾವು ಬೇರೆಯವರಿಗಿಂತಲೂ ಕೀಳು ಎನ್ನುವ ಮನೋಭಾವನೆ ಬೆಳೆಸಿಕೊಂಡ ಕಾರಣ. ಬೇರೆಯವರೊಡನೆ ಸ್ಪರ್ಧಿಸಲು ಹಿಂಜರಿಯುತ್ತಾರೆ. ಯಾವ ವಿಚಾರದಲ್ಲೂ ಒಂದು ತೀರ್ಮಾನಕ್ಕೆ ಬರಲು ಹೆದರುತ್ತಾರೆ. ತಮ್ಮ ಕಲ್ಪನೆಗಳನ್ನು ಕಾರ್ಯಗತ ಮಾಡಲು ಹಿಂಜರಿಯುತ್ತಾರೆ. ಬೇರೆಯವರ ಟೀಕೆಗೆ ಹೆದರಿ ಜವಾಬ್ದಾರಿ ವಹಿಸಿಕೊಳ್ಳಲಾರರು. ತಮ್ಮ ತಪ್ಪುಗಳಿಗೆ ಬೇರೆಯವರನ್ನು ನಿಂದಿಸುತ್ತಾರೆ. ಇವರು ಬೇರೆಯವರ ಪ್ರೀತಿ ವಿಶ್ವಾಸಕ್ಕಾಗಿ ಹಾತೊರೆಯುತ್ತಿದ್ದರೂ ತಾವೇ ಬೇರೆಯವರನ್ನು ಪ್ರೀತಿಸಿ ಗೌರವಿಸಲಾರರು. ಇದರ ಕಾರಣದಿಂದಾಗಿ ಲೈಂಗಿಕ ಜೀವನದಲ್ಲಿ ಅಸಂತುಷ್ಟರಾಗುತ್ತಾರೆ. ಇವರು ಮನಸ್ಸಿನಲ್ಲಿಯೇ ತಮ್ಮ ನ್ಯೂನತೆಗಳ ಬಗ್ಗೆ ಕೊರಗುತ್ತಿದ್ದು ಜೀವನದ ಸುಖಗಳನ್ನು ಅನುಭವಿಸಲಾರದೇ ಹೋಗುತ್ತಾರೆ.

	ಚಿಕಿತ್ಸೆ : ಭಾವಾತಿರೇಕ ಸ್ಥಿತಿಯನ್ನು ಮಾನಸ ಚಿಕಿತ್ಸೆಯಿಂದಲೇ ಗುಣಪಡಿಸಬಹುದು, ಬುದ್ದಿವಾದ ಹೇಳುವುದು ಮನಸ್ಸಿನಲ್ಲಿರುವುದನ್ನೆಲ್ಲ ತೋಡಿಕೊಳ್ಳುವಂತೆ ಮಾಡುವುದು, ಸಲಹೆ ಕೊಡುವುದು, ಹೊಸ ನಡತೆ ಕಲಿಯುವಂತೆ ಮಾಡುವುದು, ಪ್ರೇರಿತ ನಿದ್ರೆಯ ಮುಖಾಂತರ ಮನಸ್ಸಿನಲ್ಲಿ ಅಡಗಿರುವ ಚಿಂತೆ ತಿಳಿದು ಅದನ್ನು ಹೋಗಲಾಡಿಸಿ ಹೊಸ ರೀತಿಯಲ್ಲಿ ನಡೆದುಕೊಳ್ಳುವಂತೆ ಮಾಡುವುದು- ಇವೇ ಮೊದಲಾದ ಮಾನಸ ಚಿಕಿತ್ಸೆಗಳನ್ನು ಉಪಯೋಗಿಸಬಹುದು. ಮನೋವಿಶ್ಲೇಷಣ ಪದ್ಧತಿ ದೈಹಿಕ ಚಿಕಿತ್ಸೆ ವಾತಾವರಣ ಹೊಂದಾಣಿಕೆ-ಇವು ಇನ್ನೂ ಕೆಲವು ತರಹದ ಚಿಕಿತ್ಸಾ ಪದ್ಧತಿಗಳು.		
(ಕೆ.ಎಂ.ಜಿಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ